ಕಲಬುರಗಿ: ಒಳ ಮೀಸಲಾತಿ ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಈಗ 600 ಪಿಎಸ್‌ಐ ಹಾಗೂ 8 ಸಾವಿರ ಪೊಲೀಸ್ ಪೇದೆಗಳ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ವಾರ ಇಲ್ಲವೇ 10 ದಿನದೊಳಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.
ಎ.28ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಪೊಲೀಸ್ ಠಾಣೆಗಳನ್ನು ಕೇಂದ್ರ ಸರ್ಕಾರದ ನಿಯಮವಾಳಿ ಪ್ರಕಾರ ಸ್ಥಾಪಿಸಲಾಗುವುದು. ಈಗಾಗಲೇ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಕುರಿತಾಗಿ ಸಿಎಂ ಅವರು ಬಜೆಟ್ ದಲ್ಲಿ ಪ್ರಸ್ತಾಪಿಸಿದ್ದಾರೆ. ಇದನ್ನು ಹಂತಹಂತವಾಗಿ ಕಾರ್ಯಾನುಷ್ಠಾನಕ್ಕೆ ತರಲಾಗುವುದು. ಅದಲ್ಲದೇ ಪ್ರಮುಖವಾಗಿ ಬೀದರ್ ಬ್ಯಾಂಕ್ ದರೋಡೆಕೋರರ ಮಾಹಿತಿ ಗೊತ್ತಾಗಿದ್ದು, ವಿದೇಶದಲ್ಲಿದ್ದಾರೆ ಎಂಬ ಮಾಹಿತಿವಿದೆ. ಹೀಗಾಗಿ ಶೀಘ್ರ ಆರೋಪಿಗಳ ಬಂಧವಾಗಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸುದ್ದಿಗಾರರು ಹೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಚಿವರು ಹಾಗೂ ಪ್ರಮುಖರು ದೆಹಲಿಗೆ ಹೋಗುವುದೇ ರಾಜಕೀಯ ಮಾಡಲಿಕ್ಕೆ. ಡಿಕೆಶಿ ಅವರಿಂದ ಹಿಡಿದು ಬಹುತೇಕ ನಾಯಕರು ದೆಹಲಿಗೆ ಹೋಗಿ ಮೊದಲು ಇಲಾಖಾ ಕಾರ್ಯ ಕೆಲಸ ಮುಗಿಸಿ ತದನಂತರ ಎಐಸಿಸಿ ಕಚೇರಿಗೆ ಹೋಗಿ ರಾಜ್ಯದ ರಾಜಕಾರಣ ಬಗ್ಗೆ ಮಾತನಾಡಿರಬಹುದು. ಪಕ್ಷದಲ್ಲಿ ಹೈಕಮಾಂಡ್ ಎಲ್ಲವನ್ನು ಗಮನಿಸಿಯೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

